ಮ್ಯಾರಥಾನ್ ಸ್ಪರ್ಧೆ - ಒಲಿಂಪಿಕ್ಸ್‍ನಲ್ಲಿ ನಡೆಯುವ ಸ್ಪರ್ಧೆಗಳ ಪೈಕಿ ಒಂದು. ಓಡಬೇಕಾದ ದೂರ 26 ಮೈಲಿ 385 ಗಜಗಳು (42.195 ಕಿ.ಮೀ.). ಓಟದ ಸ್ಪರ್ಧೆಗಳಲ್ಲಿ ಮ್ಯಾರಥಾನ್‍ಗೆ ಐತಿಹಾಸಿಕ ಹಿನ್ನಲೆಯಿದೆ.
ಕ್ರಿ.ಪೂ. 400ರಲ್ಲಿ ಆಥೆನ್ಸ್‍ನವರಿಗೂ ಪರ್ಷಿಯನ್ನರಿಗೂ ಮ್ಯಾರಥಾನ್ ಎಂಬ ಪ್ರದೇಶದಲ್ಲಿ ಯುದ್ಧ ನಡೆಯಿತು. ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಸೈನ್ಯ ಹೊಂದಿದ್ದ ಆಥೆನ್ಸ್ ಸೈನ್ಯದ ಮುಖಂಡ ನೆರೆಪ್ರಾಂತ್ಯವಾದ ಸ್ಪಾರ್ಟಕ್ಕೆ ಫೀಡಿಪಿಡೆಸ್ ಎಂಬ ಸೈನಿಕನನ್ನು ಸ್ಪಾರ್ಟನ್ನರ ನೆರವು ಕೇಳಲು ಯುದ್ಧಭೂಮಿಯಿಂದ ಕಳುಹಿಸಿದ. 150 ಮೈಲಿಗೂ (ಸುಮಾರು 240 ಕಿ.ಮೀ.) ಹೆಚ್ಚಿದ್ದ ದೂರವನ್ನು ಆತ ಓಡಿ ಸ್ಪಾರ್ಟನರಿಗೆ ಸುದ್ದಿ ಮುಟ್ಟಿಸಿದ. ಹೀಗೆ ಓಡುವಾಗ ಆತ ನದಿಗಳಿದ್ದ ಕಡೆ ಈಜಿ. ಬೆಟ್ಟಗಳಿದ್ದ ಕಡೆ ಹತ್ತಿ ಇಳಿದು ದಾರಿಯನ್ನು ಕ್ರಮಿಸಿದ್ದ. ಆತ ಇದಕ್ಕಾಗಿ ತೆಗೆದುಕೊಂಡ ಕಾಲ 48 ಗಂಟೆಗಳು. ಅನಂತರ ಹಿಂದಿರುಗಿ ಬಂದು ಅವರು ಸಹಾಯಕ್ಕೆ ಬರುವ ವಿಚಾರವನ್ನು ತಿಳಿಸಿದ. ಇದರಿಂದ ಉತ್ತೇಜಿತವಾದ ಆಥೆನ್ಸ್ ಸೈನ್ಯ, ನೆರವು ಬರುವ ಮುನ್ನವೇ ಪರ್ಷಿಯನ್ನರನ್ನು ಸೋಲಿಸಿತು. ಈ ವಿಜಯವಾರ್ತೆಯನ್ನು ಆಥೆನ್ಸ್‍ಗೆ ಮುಟ್ಟಿಸಲು ಮತ್ತೆ ಫೀಡಿಪಿಡೆಸನನ್ನೇ ಆರಿಸಲಾಯಿತು. ಮ್ಯಾರಥಾನ್ ಯುದ್ಧ ಭೂಮಿಯಿಂದ 22 ಮೈಲಿ 1470 ಗಜಗಳಷ್ಟು (36.75 ಕಿ.ಮೀ.) ದೂರದಲ್ಲಿದ್ದ ಆಥೆನ್ಸ್‍ಗೆ ಪೀಡಿಪಿಡೆಸ್ ಓಡಿ, ಕೋಟೆಯ ಮುಖ್ಯದ್ವಾರದ ಬಳಿ ಯುದ್ಧ ಸಮಾಚಾರ ಕೇಳಲು ಕಾತುರದಿಂದ ನೆರೆದಿದ್ದ ಜನಸ್ತೋಮಕ್ಕೆ `ಸಂತೋಷಪಡಿ, ನಾವು ಗೆದ್ದಿದ್ದೇವೆ` ಎಂದು ಘೋಷಿಸಿ ಅಲ್ಲಿಯೇ ಕುಸಿದು ಅಸುನೀಗಿದ. ಈ ಸಾಹಸವೇ ಇಂದಿನ ಮ್ಯಾರಥಾನ್ ಸ್ಪರ್ಧೆಗೆ ಮೂಲ.

ಪ್ಯಾರಿಸಿನ ಮೈಕೆಲ್ ಬ್ರೇಲ್ ಎಂಬಾತ ಪೀಡಿಪಿಡೆಸನ ಸ್ಮರಣೆಗಾಗಿ ಒಲಿಂಪಿಕ್ಸ್‍ನಲ್ಲಿ ಇಂಥ ಓಟದ ಸ್ಪರ್ಧೆಯನ್ನು ಅಳವಡಿಸಬೇಕೆಂದು ಯೋಚಿಸಿದ. ಅಂತೆಯೇ 1896 ರಲ್ಲಿ ಆಥೆನ್ಸ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಇಂಥ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸ್ಪರ್ಧಿಗಳು ಓಡಿದ ದೂರ 24 ಮೈಲಿ 1500 ಗಜಗಳು (39.99 ಕಿ.ಮೀ.). ಇದರಲ್ಲಿ ಸ್ವಿರಿಡನ್ ಲೂಯಿಸ್ ಎಂಬ ಕುರಿಗಾಹಿಯೊಬ್ಬ ಭಾಗವಹಿಸಿ, ತರಬೇತಿ ಹೊಂದಿದ್ದ ಹಲವಾರು ದೇಶಗಳ ಸ್ಪರ್ಧಿಗಳನ್ನು ಸೋಲಿಸಿ, ಗ್ರೀಸ್ ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ.

1908ರ ಲಂಡನ್ ಒಲಿಂಪಿಕ್ಸ್‍ನಲ್ಲಿ ಈ ಸ್ಪರ್ಧೆಯನ್ನು ಅಲ್ಲಿಯ ರಾಜಗೃಹದ ಮುಂಭಾಗದಿಂದ ಪ್ರಾರಂಭಿಸಿ ಓಟದ ಸ್ಫರ್ಧೆಯ ಕ್ರೀಡಾಂಗಣದಲ್ಲಿ ವಿಶೇಷ ಅತಿಥಿಗಳಿಗಾಗಿ ಮೀಸಲಿಟ್ಟ ಗ್ಯಾಲರಿಯ ಮುಂಭಾಗದಲ್ಲಿ ಮುಕ್ತಾಯವಾಗುವಂತೆ ಮಾಡಿದರು. ಇವೆರಡು ಸ್ಥಳಗಳ ನಡುವಣ ದೂರ 26 ಮೈಲಿ 385 ಗಜ ಇತ್ತು. ಇದನ್ನು ಇಟ್ಟುಕೊಂಡು 1924 ಪ್ಯಾರಿಸ್ ಒಲಿಂಪಿಕ್ಸ್‍ನಿಂದ ಈಚೆಗೆ ಈ ಓಟದ ಸ್ಫರ್ಧೆಯ ದೂರವನ್ನು 26 ಮೈಲಿ 385 ಗಜ ಎಂದು ನಿಗದಿಪಡಿಸಲಾಯಿತು. ಇಂದಿಗೂ ಮ್ಯಾರಥಾನ್ ಓಟ ಒಂದು ನಿರ್ದಿಷ್ಟ ಪ್ರದೇಶದಿಂದ ಪ್ರಾರಂಭವಾಗಿ ಓಟದ ಸ್ಪರ್ಧೆಯ ಕ್ರೀಡಾಂಗಣದಲ್ಲಿಯೆ ಮುಕ್ತಾಯವಾಗುತ್ತದೆ.

1952ನೆಯ ಒಲಿಂಪಿಕ್ಸ್‍ನಲ್ಲಿ ಮೊದಲೊಂದು ಅಷ್ಟು ದೂರ ಓಡಿರದಿದ್ದ ಜೆಕೊಸ್ಲೋವಾಕಿಯದ ಎಮಿಲ್ ಜಟೊಪೆಕ್ ಈ ದೂರವನ್ನು 2 ಗಂಟೆ 23 ನಿಮಿಷ 32 ಸೆಕೆಂಡ್‍ಗಳಲ್ಲಿ ಓಡಿ ದಾಖಲೆ ಸ್ಥಾಪಿಸಿದ. 1960ರಲ್ಲಿ ಇಥಿಯೋಪಿಯ ಅಂಗರಕ್ಷಕ ಅಬೀಬ್ ಬಿಕಿಲ ಇದೇ ದೂರವನ್ನು ಬರಿಗಾಲಲ್ಲಿ 2 ಗಂಟೆ 15 ನಿಮಿಷ 16.2 ಸೆಕೆಂಡ್‍ಗಳಲ್ಲಿಯೂ 1964ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಬೂಟು ಧರಿಸಿ 2 ಗಂಟೆ 12 ನಿಮಿಷ 11.2 ಸೆಕೆಂಡ್‍ಗಳಲ್ಲಿಯೂ ಓಡಿ ದಾಖಲೆ ಸ್ಥಾಪಿಸಿದ. 12 ವರ್ಷಗಳ ನಂತರ ಅಂದರೆ, 1976ರ ಮಾಂಟ್ರಿಯಲ್ ಒಲಿಂಪಿಕ್ಸ್‍ನಲ್ಲಿ ಪೂರ್ವಜರ್ಮನಿಯ ವಾಲ್ಡೆಮರ್ ಸಿಯೆರ್‍ಪಿನ್‍ಸ್ಕಿ 2 ಗಂಟೆ 11 ನಿಮಿಷ 03 ಸೆಕೆಂಡುಗಳಲ್ಲಿ ಓಡಿ ಬಿಕಿಲ ಹೆಸರಲ್ಲಿದ್ದ ದಾಖಲೆ ಮುರಿದರು. ನಂತರ 1984ರಲ್ಲಿ ಪೋರ್ಚುಗಲ್‍ನ ಕಾರ್ಲೋಸ್ ಲೋಸೆಸ್ 2 ಗಂಟೆ 09 ನಿಮಿಷ 21 ಸೆಕೆಂಡುಗಳಲ್ಲಿ ವಾಲ್ಡೆಮರ್ ದಾಖಲೆಯನ್ನು ಅಳಿಸಿಹಾಕಿದರು.

ಮ್ಯಾರಥಾನ್ ಓಟದ ಸ್ಪರ್ಧೆಗಳು ಬೇರೆ ಬೇರೆ ದೇಶಗಳಲ್ಲಿ ನಡೆಯುವಾಗ ರಸ್ತೆ ಬೆಟ್ಟ ಕಡಿದಾದ ಪ್ರದೇಶ ಇಂಥವುಗಳನ್ನೊಳಗೊಂಡಿರುತ್ತದೆ. ಇದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಈ ಸ್ಪರ್ಧೆಯಲ್ಲಿ ವಿಶ್ವದಾಖಲೆಯನ್ನು ಪರಿಗಣಿಸುವುದಿಲ್ಲ.
(ಬಿ.ಎಸ್.ಬಿ.)
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ